ಶಾರದಾಪ್ರಸಾದ್, ಎಚ್ ವೈ
	(1924) ರಾಷ್ಟ್ರಪ್ರೇಮಕ್ಕೆ ಹೆಸರಾದವರು. ಮಿತಭಾಷಿ, ಜ್ಞಾನವಂತರು, ಹತ್ತಿರ ಹೋದಾಗ ಸ್ನೇಹ ಸೌಹಾರ್ದಗಳ ತಂಗಾಳಿಯ ತಂಪಿನ ಅನುಭವ. ನಡೆ-ನುಡಿ ಎರಡರಲ್ಲೂ ಗಂಭೀರ-ಸರಳ ಪ್ರತಿಭೆಯ ಗುಣ ಶಿಸ್ತು-ಒಪ್ಪು, ಅದಕ್ಕೆ ಇನ್ನೊಂದು ಹೆಸರು ಶಾರದಾ ಪ್ರಸಾದ್ ಎಚ್. ವೈ.

	1924ರಲ್ಲಿ ಬೆಂಗಳೂರಿನಲ್ಲಿ ಜನನ. ಹೊಳೇನರಸೀಪುರ ಯೋಗಾನರಸಿಂಹಂ ಮತ್ತು ಸರಸ್ವತಿ ದಂಪತಿಗಳ ಹೆಮ್ಮೆಯ ಪುತ್ರ. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಅದಕ್ಕೂ ಮುಂಚೆ, ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ. ವಿಶ್ವವಿದ್ಯಾಲಯ ಸಂಘದ ಕಾರ್ಯದರ್ಶಿಯಗಿ ಶಾರದಾಪ್ರಸಾದ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ನಾಯಕ. ಎಂಟೂವರೆ ತಿಂಗಳು ಸೆರೆವಾಸ. ಮೈಸೂರು ನಗರ ವಿದ್ಯಾರ್ಥಿ ಚಳವಳಿಯ ಬಿರುಗಾಳಿ ಕೇಂದ್ರವಾಗಲು ಮೂಲ ಸ್ಫೂರ್ತಿ.

	ವಿಶ್ವವಿದ್ಯಾನಿಲಯ ಪದವಿ ಪಡೆದ ಮೇಲೆ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕಾ ಬಳಗ ಸೇರಿದರು. ಮೊದಲು ಚೆನ್ನೈನಲ್ಲಿ, ಆಮೇಲೆ ಮುಂಬೈದಲ್ಲಿ. 1945ರಿಂದ 1955ರವರೆಗೆ ಪತ್ರಿಕಾ ವೃತ್ತಿ. ಹಿರಿಯ ಅನುಭವೀ ಪತ್ರಕರ್ತರಿಗೆ ಮೀಸಲಾದ ಸುದ್ದಿ ಸಂಪಾದಕ ಕುರ್ಚಿಯನ್ನು ಅಲಂಕರಿಸಿದ ಅತ್ಯಂತ ಕಿರಿಯ ಸುದ್ದಿ ಸಂಪಾದಕ ಎಂಬ ಕೀರ್ತಿ ದೇಶದೆಲ್ಲೆಡೆ ಪತ್ರಿಕಾರಂಗದಲ್ಲಿ ಹಬ್ಬಿತು. ಆಮೇಲೆ ನೀಮನ್ ಫೆಲೋಶಿಪ್ ಪಡೆದು ಅಮೆರಿಕೆಯ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಪತ್ರಿಕೋದ್ಯಮ ವ್ಯಾಸಂಗ.

	1957ರಲ್ಲಿ ಭಾರತ ಸರ್ಕಾರದ ಪ್ರಕಾಶನ ವಿಭಾಗ ಸೇರಿದರು ಶಾರದಾ ಪ್ರಸಾದ್. 1959-66ರವರೆಗೆ ಯೋಜನಾ ಆಯೋಗದ ನಿಯತಕಾಲಿಕ, ಯೋಜನಾದ ಮುಖ್ಯ ಸಂಪಾದಕರಾಗಿ ಕರ್ತವ್ಯ ನಿರ್ವಹಣೆ. ಸುಪ್ರಸಿದ್ಧ ಅಮೆರಿಕನ್ ವಿನ್ಯಾಸಕಾರ ಚಾಲ್ರ್ಸ್ ಇಯಮ್ಸ್ ವಿನ್ಯಾಸಗೊಳಿಸಿದ ಜವಹರಲಾಲ್ ನೆಹರೂ ಕುರಿತ ಪ್ರದರ್ಶನದ ಸಂಪಾದಕೀಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಇಂದಿರಾಗಾಂಧಿಯವರ ಸಮೀಪ ಸಂಪರ್ಕಕ್ಕೆ ಬಂದರು.

	1966ರ ಜನವರಿಯಲ್ಲಿ ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಶಾರದಾಪ್ರಸಾದ್, ಅವರ ಕಾರ್ಯಾಲಯದಲ್ಲಿ ಉಪವಾರ್ತಾ ಸಲಹೆಗಾರರಾಗಿ ನೇಮಕಗೊಂಡರು. ಭಾಷಣಗಳನ್ನು ಸಿದ್ಧ ಪಡಿಸುವುದರಲ್ಲಿ, ಪತ್ರ ವ್ಯವಹಾರ ಹಾಗೂ ಪತ್ರಿಕಾ ಸಂಪರ್ಕ ಕಾರ್ಯಗಳಲ್ಲಿ ಇಂದಿರಾಗಾಂಧಿ ಅವರಿಗೆ ನೆರವಾಗುವುದು ಅವರ ಹೊಣೆಯಾಯಿತು. ಮುಂದಿನ ಎರಡು ವರ್ಷಗಳಲ್ಲಿ ಆ ಘಟಕದ ಮುಖ್ಯಸ್ಥರಾದರು. ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಗಳಾದಾಗ ಅವರ ಬಳಿಯೂ ಕೆಲ ತಿಂಗಳಕಾಲ ಅದೇ ಹುದ್ದೆಯಲ್ಲಿ ಮುಂದುವರೆದರು. ಆಮೇಲೆ ಭಾರತೀಯ ಸಮೂಹ ಸಂವಹನ ಸಂಸ್ಥೆಯ ನಿರ್ದೇಶಕ ಹುದ್ದೆ ಅಲಂಕರಿಸಿದರು. ಸಂಸ್ಥೆಗೆ ಶೈಕ್ಷಣಿಕ ಔನತ್ಯ ತಂದುಕೊಟ್ಟರು. ಶಾರದಾಪ್ರಸಾದ್ ಅದರ ನಿರ್ದೇಶಕರಾಗಿದ್ದ ಸಮಯದಲ್ಲಿ ಸಂಸ್ಥೆ ತನ್ನ ಹರವನ್ನು ವಿಸ್ತರಿಸಿಕೊಂಡಿತು. ಹೊಸ ತರಬೇತಿ ಕೋರ್ಸ್‍ಗಳು ಆರಂಭವಾದವು. ಅಲಿಪ್ತ ರಾಷ್ಟ್ರಗಳ ಪತ್ರಕರ್ತರಿಗಾಗಿ ಆರಂಭವಾದ ವಿಶೇಷ ವ್ಯಾಸಂಗ ಕೋರ್ಸ್ ಗಮನಾರ್ಹ ಕೊಡುಗೆ. ನೂತನ, ಹೆಚ್ಚು ನ್ಯಾಯಸಮ್ಮತ ಹಾಗೂ ಇನ್ನಷ್ಟು ದಕ್ಷ ಜಾಗತಿಕ ಸಮಾಚಾರ ಮತ್ತು ಸಂಪರ್ಕ ವ್ಯವಸ್ಥೆಯ ಕಡೆ ಒಂದು ಹೆಜ್ಜೆಯಾಗಿ ಇಂದಿನ ಸಮಾಜದಲ್ಲಿ ಸಂವಹನ ಸಮಸ್ಯೆಗಳನ್ನು ಅಧ್ಯಯನ ಮಾಡಿದ ಮ್ಯಾಕ್‍ಬ್ರೈಡ್ ಆಯೋಗದ ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವುದರಲ್ಲಿ ಈ ಸಂಸ್ಥೆ ಶಾರದಾ ಪ್ರಸಾದ್ ನೇತೃತ್ವದಲ್ಲಿ ಗುರುತರ ಹೊಣೆ ನಿರ್ವಹಿಸಿತು.

	1980ರಲ್ಲಿ ಇಂದಿರಾಗಾಂಧಿ ಪುನಃ ಪ್ರಧಾನ ಮಂತ್ರಿಯಾದಾಗ, ಶಾರದಾಪ್ರಸಾದ್ ಕಾರ್ಯದರ್ಶಿ ಸ್ಥಾನಮಾನದಲ್ಲಿ ಅವರ ವಾರ್ತಾ ಸಲಹೆಗಾರರಾಗಿ ವಾಪಸಾದರು. 1988ರವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರೆದರು. ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರ ಸಂಗಡ ಸುಮಾರು 50ಕ್ಕೂ ಹೆಚ್ಚು ದೇಶಗಳಲ್ಲಿ ಶಾರದಾಪ್ರಸಾದ್ ಪ್ರವಾಸ ಮಾಡಿದ್ದಾರೆ.

	ಶಾರದಾ ಪ್ರಸಾದ್ ಹಲವಾರು ರಾಷ್ಟ್ರೀಯ ಸಂಘ-ಸಂಸ್ಥೆಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. 1969ರಲ್ಲಿ ಮಹಾತ್ಮಾಗಾಂಧಿ ಶತಮಾನೋತ್ಸವ ಪ್ರದರ್ಶನ ಪ್ರಧಾನ ಸಂಘಟಕರಾಗಿದ್ದರು. ಮಾಂಟ್ರಿಯಲ್ ಮತ್ತು ಒಸಾಕಾಗಳಲ್ಲಿ ನಡೆದ ಎಕ್ಸ್‍ಪೋ ಪ್ರದರ್ಶನಗಳಲ್ಲಿ ಭಾರತೀಯ ಮಳಿಗೆಗಳ ವಿಷಯ ವಸ್ತುತಜ್ಞ ಸಲಹೆಗಾರರಾಗಿದ್ದರು. 15ವರ್ಷಗಳ ಕಾಲ ಸಾಂಸ್ಕøತಿಕ ಸಂಬಂಧಗಳ ಭಾರತೀಯ ಮಂಡಳಿ ಉಪಾಧ್ಯಕ್ಷರಾಗಿದ್ದರು. 1985ರಿಂದ 1989ರವರೆಗೆ ಇಂದಿರಾಗಾಂಧಿ ಸ್ಮಾರಕ ಟ್ರಸ್ಟಿನ ಕಾರ್ಯದರ್ಶಿಯಾಗಿದ್ದರು. ಈಗ ಜನಹರಲಾಲ್ ನೆಹರೂ ಸ್ಮಾರಕ ನಿಧಿಯ ಧರ್ಮದರ್ಶಿಗಳಾಗಿದ್ದಾರೆ. ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥ ಭಂಡಾರದ ಸದಸ್ಯರಾಗಿ ಹಾಗೂ ಶಿಮ್ಲಾದ ಉನ್ನತ ಅಧ್ಯಯನಗಳ ಭಾರತೀಯ ಸಂಸ್ಥೆ ಸದಸ್ಯರಾಗಿ ಇವರ ಕೊಡುಗೆ ಅಮೂಲ್ಯ. ಅಹಮದಾಬಾದಿನ ವಿನ್ಯಾಸ ಕುರಿತ ಭಾರತೀಯ ಸಂಸ್ಥೆಯ ಅಧ್ಯಕ್ಷರಾಗಿ ಆರು ವರ್ಷ ಸೇವೆ ಸಲ್ಲಿಸಿದ್ದಾರೆ. ಕಲೆ ಕುರಿತ ಇಂದಿರಾ ಗಾಂಧಿ ರಾಷ್ಟ್ರೀಯ ಕೇಂದ್ರದ ಟ್ರಸ್ಟಿಯಾಗಿ ಹತ್ತು ವರ್ಷ ನಿರ್ವಹಣೆ ಮಾಡಿದ ಪ್ರಸಾದ್, ಕೋಮು ಸೌಹಾರ್ದ ಕುರಿತ ರಾಷ್ಟ್ರೀಯ ಪ್ರತಿಷ್ಠಾನದ ಮಂಡಳಿಯಲ್ಲಿ ಸದಸ್ಯರಾಗಿದ್ದರು. ಗಾಂಧೀ ಸ್ಮøತಿ ಹಾಗೂ ದರ್ಶನ್ ಸಮಿತಿಗಳ ಸ್ಥಾಪನೆಯಲ್ಲೂ ತೊಡಗಿಸಿ ಕೊಂಡಿದ್ದರು.

	ಎಚ್.ವೈ. ಶಾರದಾ ಪ್ರಸಾದ್ ಅವರ ಜನಪ್ರಿಯ ಹೆಸರು, ಶೌರಿ; ಕಛೇರಿ ಸಹೋದ್ಯೋಗಿಗಳಿಗೆ ಸ್ನೇಹಿತರಿಗೆ ಶಾರದಾ ಪ್ರಿಯವಾದನಾಮ. ನಿಮೇಗಾನದರೂ ಸಂದೇಹ ಇದ್ದರೆ ಶಾರದಾ ಮಾಡಿದ ಹಾಗೆ ಮಾಡಿ ಎಂದು ಕಛೇರಿ ಸಹೋದ್ಯೋಗಿಗಳಿಗೆ ಇಂದಿರಾ ಗಾಂಧಿ ಹೇಳುತ್ತಿದ್ದರಂತೆ. ಅಷ್ಟುಗಾಢವಾದ ವಿಶ್ವಾಸ.

	ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಆರ್.ಕೆ. ನಾರಾಯಣ್ ಅವರ ಸ್ವಾಮಿ ಅಂಡ್ ಫ್ರೆಂಡ್ಸ್ ಪುಸ್ತಕವನ್ನು ಸ್ವಾಮಿ ಮತ್ತು ಸ್ನೇಹಿತರು ಎಂದು ಕನ್ನಡಕ್ಕೆ ಭಾಷಾಂತರ ಮಾಡಿ ಜನರ ಗಮನ ಸೆಳೆದಿದ್ದರು. ಅವರು ಕೆಲವು ಪ್ರಮುಖ ಗ್ರಂಥಗಳ ಸಂಪಾದನೆಯನ್ನೂ ಮಾಡಿದ್ದಾರೆ. ಕರ್ನಾಟಕದರ್ಶನ ಅವರು ಸಂಪಾದಿಸಿರುವ ಗ್ರಂಥ. ಶಿವರಾಮ ಕಾರಂತರ ನಾಲ್ಕು ಕಾದಂಬರಿಗಳನ್ನು ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದ ಮಾಡಿದ್ದಾರೆ. ಆ ಪೈಕಿ ಕುಡಿಯರ ಕೂಸು ಮತ್ತು ಮೈಮನಗಳ ಸುಳಿಯಲ್ಲಿ-ಕಾದಂಬರಿಗಳು ಪ್ರಮುಖ. ಜವಹರಲಾಲ್ ನೆಹರೂ ಅವರ ಆಯ್ದ ಬರಹಗಳ ಮಹಾನ್ ಸಂಪುಟದ ಜಂಟೀ ಸಂಪಾದಕರು. ಜವಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರ ಭಾಷಣಗಳ ಸಂಪುಟಗಳಿಗೆ ಸಂಪಾದಕರಾಗಿದ್ದಾರೆ. ನೆಹರೂ ಶತಮಾನೋತ್ಸವ ಸಂಪುಟ ಹಾಗೂ ಸ್ಪಿರಿಟ್ ಆಫ್ ಇಂಡಿಯಾ ಸಂಪುಟಗಳ ಸಂಪಾದನೆ ಸಹ ಇವರದೇ. 1962ರಿಂದ 2002ರ ವರೆಗೆ 40 ವರ್ಷಕಾಲ ಶಾರದಾ ಪ್ರಸಾದ್ ಬ್ರಿಟಾನಿಕಾ ವಿಶ್ವಕೋಶಕ್ಕೆ ಭಾರತ ಕುರಿತು ಲೇಖಕರಾಗಿದ್ದರು. ಈಗ ಪ್ರತಿ ವಾರವೂ ಪ್ರಮುಖ ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಂಕಣಕಾರರಾಗಿ ಬರೆಯುತ್ತಿದ್ದಾರೆ. ರಾಷ್ಟ್ರಪತಿ ಭವನ ಕುರಿತು ಪುಸ್ತಕ ಬರೆದಿದ್ದಾರೆ. ಟಿ..ಎಸ್.ಸತ್ಯನ್ ಅವರ ಚಿತ್ರ ಸಂಪುಟ ಎಕ್‍ಪ್ಲೋರಿಂಗ್ ಕರ್ನಾಟಕದ ಸಾಹಿತ್ಯ ಪ್ರಸಾದ್ ಅವರದ್ದು. 2003ರಲ್ಲಿ ದಿ ಬುಕ್ ಐ ಶುಡ್ ನಾಟ್ ಬಿ ರೈಟಿಂಗ್  ಪುಸ್ತಕ ಬರೆದರು. 

	ಅವರಿಗೆ ಸಂದ ಗೌರವಗಳು ಅಭಿಮಾನಾಸ್ಪದ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, 2000ನೆ ಇಸವಿಯಲ್ಲಿ ಪದ್ಮಭೂಷಣ ಪ್ರಶಸ್ತಿ ಸಂದಿವೆ. 2001ರಲ್ಲಿ ರಾಷ್ಟ್ರೀಯ ಐಕ್ಯಕ್ಕಾಗಿನ ಇಂದಿರಾಗಾಂಧಿ ಪುರಸ್ಕಾರಕ್ಕೂ ಪಾತ್ರರು. ಆ ಪ್ರಶಸ್ತಿಯನ್ನು ಶಾರದಾ ಪ್ರಸಾದ್ ಅವರಿಗೆ ಶ್ರೀಮತಿ ಸೋನಿಯಾ ಗಾಂಧಿ ನೀಡುತ್ತಾ ಹೇಳಿದ ಮಾತು ಇಲ್ಲಿ ಉಲ್ಲೇಖನಿಯ. ಅವರೆಂದರು; ಅತ್ಯಂತ ಉದಾತ್ತ ಮಾನವೀಯ ಸಾಮಥ್ರ್ಯಗಳ ಪ್ರತಿನಿಧಿ, ಗೌರವ, ಘನತೆ ಹಾಗೂ ಪ್ರಾಮಾಣಿಕತೆಗಳಿಗೆ ಒಂದು ಮಾದರಿ”.

	ಹೊಳೆನರಸೀಪುರ ಯೋಗಾನರಸಿಂಹಂ ಶಾರದಾ ಪ್ರಸಾದ್ ಅಪ್ಪಟ ಭಾರತೀಯ, ಅತ್ಯುತ್ತಮ ಪತ್ರಕರ್ತ, ಸಂಗೀತ-ಸಾಹಿತ್ಯಗಳಲ್ಲಿ ಸದಭಿರುಚಿ ಹೊಂದಿದ ಒಬ್ಬ ಶ್ರೇಷ್ಠ ಕನ್ನಡಿಗ.			
											(ಕೆ.ಎಸ್.ಅಚ್ಯುತನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ